ಪ್ಲಾಸೆಂಟಾ ಪ್ರಿವಿಯಾ ಸ್ಥಿತಿಯಲ್ಲಿ ಪ್ಲಾಸೆಂಟಾ ಯಾಕೆ ಗರ್ಭಾಶಯದ ಕೆಳಗೆ ಸ್ಥಾಪಿತವಾಗುತ್ತದೆ ಎಂದು ಇನ್ನು ಸ್ಪಷ್ಟವಾಗಿಲ್ಲ. ಹಿಂದಿನ ಗರ್ಭಪಾತ, ಶಸ್ತ್ರಚಿಕಿತ್ಸೆ ಅಥವಾ ಸಿ-ಸೆಕ್ಷನ್ (ಸಿಸೇರಿಯನ್) ಕಾರಣಗಳಿಂದ ಗರ್ಭಕೋಶದ ಆಂತರಿಕ ಪದರದ ಮೇಲಿನ ಭಾಗವು ಸಾಕಷ್ಟು ದಪ್ಪವಾಗಿಲ್ಲದಿದ್ದರೆ ಪ್ಲಾಸೆಂಟಾ ಪ್ರಿವಿಯಾ ಆಗುವ ಸ್ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುತ್ತದೆ. ಅವಳಿ ಗರ್ಭಾವಸ್ಥೆ ಮತ್ತು ಕೆಲವು ಬಾರಿ ಪ್ಲಾಸೆಂಟಾ ಅಥವಾ ಫೈಬ್ರಾಯಿಡ್ಗಳು ದೊಡ್ಡದಾಗಿದ್ದರೆ ಕೂಡ ಪ್ಲಾಸೆಂಟಾ ಪ್ರಿವಿಯಾ ಕಂಡುಬರುತ್ತದೆ. ತಾಯಿಯ ವಯಸ್ಸು 35 ಕ್ಕೂ ಹೆಚ್ಚು ಇದ್ದಲ್ಲಿ ಪ್ಲಾಸೆಂಟಾ ಪ್ರಿವಿಯಾ ಆಗುವ ಅವಕಾಶಗಳು ಜಾಸ್ತಿ ಆಗುತ್ತವೆ. ಗರ್ಭಾವಸ್ಥೆ ಮುಂದುವರೆದಂತೆ, ಗರ್ಭಾಶಯದ ಕೆಳಭಾಗವು ಬೆಳೆಯುತ್ತದೆ ಮತ್ತು ಪ್ಲಾಸೆಂಟಾ ಗರ್ಭಾಶಯದ ಕೆಳಭಾಗದಲ್ಲಿದ್ದರೆ, ಇದು ಪ್ಲಾಸೆಂಟಾದ ರಕ್ತನಾಳಗಳನ್ನು ಅಡ್ಡಿಪಡಿಸುತ್ತದೆ ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
ಪ್ಲಾಸೆಂಟಾ ಪ್ರಿವಿಯಾದ ಲಕ್ಷಣಗಳು:
ಗರ್ಭಾವಸ್ಥೆಯ 20 ವಾರಗಳ ನಂತರ ಹಠಾತ್ ಮತ್ತು ನೋವುರಹಿತ ರಕ್ತಸ್ರಾವದ ಆರಂಭ. ರಕ್ತಸ್ರಾವದ ಪ್ರಮಾಣವು ಅಸ್ಥಿರ ಅಥವಾ ನಿರಂತರವಾಗಿರಬಹುದು.
ತೊಡಕುಗಳು:
ರಕ್ತಸ್ರಾವ, ಭ್ರೂಣದ ಹೈಪೊಕ್ಸಿಯಾ (ಅಂಗಾಂಶಗಳನ್ನು ತಲುಪುವ ಆಮ್ಲಜನಕದ ಪ್ರಮಾಣದಲ್ಲಿನ ಕೊರತೆ) ಮತ್ತು ಅವಧಿ-ಪೂರ್ವ ಪ್ರಸವ. ಪ್ಲೆಸೆಂಟಾ ಪ್ರಿವಿಯಾವನ್ನು ಪ್ರಸವಪೂರ್ವ ಅಲ್ಟ್ರಾಸೌಂಡ್ ಸಮಯದಲ್ಲಿ ಸಾಮಾನ್ಯವಾಗಿ ನಿರ್ಣಯಿಸಲಾಗುತ್ತದೆ. ಸಾಂದರ್ಭಿಕವಾಗಿ ರಕ್ತಸ್ರಾವದ ಲಕ್ಷಣಗಳು ಉಂಟಾಗುವ ತನಕ ರೋಗನಿರ್ಣಯ ಮಾಡುವದಿಲ್ಲ.
ಚಿಕಿತ್ಸೆ:
ಪ್ರಸವಪೂರ್ವ ಜನನವನ್ನು ತಡೆಗಟ್ಟುವುದು ಮತ್ತು ತಾಯಿಯ ರಕ್ತಸ್ರಾವವನ್ನು ನಿರ್ವಹಿಸುವುದು ಗುರಿಯಾಗಿದೆ. ಸಾಮಾನ್ಯ ರಕ್ತಸ್ರಾವ ಇದ್ದರೆ, ಬೆಡ್ ರೆಸ್ಟ್ ಮಾಡಿದರೆ ಸಾಕು. ಆದರೆ ಅತಿಯಾದ ರಕ್ತಸ್ರಾವ ಇದ್ದಲ್ಲಿ, IV ದ್ರವಗಳು (Intravenous Fluids) ಮತ್ತು ರಕ್ತದ ಅಗತ್ಯವಿರುತ್ತದೆ. ಕೆಲವು ಸಂದರ್ಭಗಳಲ್ಲಿ, ರಕ್ತಸ್ರಾವವು ವಿಪರೀತ ಆಗಿದ್ದರೆ ಮತ್ತು ಮಗುವಿನ ಹೃದಯದ ಬಡಿತವು ನೋವಿನ ಲಕ್ಷಣಗಳನ್ನು ತೋರಿಸುತ್ತಿದ್ದರೆ, ತಕ್ಷಣವೇ ವೈದ್ಯರು ತುರ್ತುಸ್ಥಿತಿ ಘೋಷಿಸಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಬಹುದು.