2015 ರ ಹೊತ್ತಿಗೆ ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳ ಸಂಖ್ಯೆ 11.2 ಕೋಟಿಯಾಗಿದೆ. ಆದರೆ ಅಪೌಷ್ಟಿಕತೆ ಮತ್ತು ಕುಂಠಿತ ಬೆಳವಣಿಗೆ ನಮ್ಮ ದೇಶದ ಅತಿ ದೊಡ್ಡ ಹೊರೆಯಾಗಿದೆ. ಜಾಗತಿಕ ಅಪೌಷ್ಟಿಕತೆಯ 38% ಭಾಗ ಭಾರತದಲ್ಲಿದೆ.
NFHS-3 ಮಾಹಿತಿಯ ಪ್ರಕಾರ, ಭಾರತೀಯ ತಾಯಂದಿರಲ್ಲಿ 57% ನಷ್ಟು ಮಂದಿ ತಮ್ಮ ನವಜಾತ ಶಿಶುಗಳಿಗೆ ಪೂರ್ವಭಾವಿ ಆಹಾರವನ್ನು (ಮಗುವಿಗೆ ಸ್ತನಪಾನದ ಮುಂಚೆ ನೀಡಲಾಗುವ ಆಹಾರ) ನೀಡುತ್ತಾರೆ ಮತ್ತು ಸುಮಾರು 45% ರಷ್ಟು ತಾಯಂದಿರು ಮಗುವಿನ ಜನನದ 24 ಗಂಟೆಗಳ ಒಳಗಿನ ಸಮಯದಲ್ಲಿ ಸ್ತನಪಾನವನ್ನು ಪ್ರಾರಂಭಿಸುವುದಿಲ್ಲ. ಸ್ತನಪಾನವನ್ನು ಆದಷ್ಟು ಬೇಗ ನೀಡುವುದು ಬಹಳ ಮುಖ್ಯವಾಗಿದೆ. ಕೊಲಸ್ಟ್ರಮ್ (ಮಗುವಿನ ಜನನದ ನಂತರದ ಮೊದಲ ಎದೆ ಹಾಲು) ತುಂಬಾ ಪೌಷ್ಟಿಕಾಂಶ ಮತ್ತು ಮಗುವಿನ ಪ್ರತಿರಕ್ಷೆಯನ್ನು ನಿರ್ಮಿಸುವಲ್ಲಿ ಸಹಾಯ ಮಾಡುತ್ತದೆ. ಸ್ತನಪಾನವನ್ನು ಆರಂಭಿಸುವ (1 ಗಂಟೆಯ ಜನನದೊಳಗೆ) ದರವು 24.5% ನಷ್ಟು ಕಡಿಮೆಯಾಗಿದೆ.
ಶಿಶುಗಳು ಮತ್ತು ಚಿಕ್ಕ ಮಕ್ಕಳ ಅಸಮರ್ಪಕ ಪೌಷ್ಟಿಕಾಂಶ ಸ್ಥಿತಿಯ ಕೆಲವು ಪ್ರಮುಖ ಕಾರಣಗಳು; ಆಹಾರ ಮತ್ತು ಸ್ತನಪಾನ ಪದ್ದತಿಯ ಸರಿಯಾದ ತಿಳುವಳಿಕೆ ಮಗುವಿನ ಆರೈಕೆ ಮಾಡುವವರಲ್ಲಿ ಇಲ್ಲದಿರುವುದು, ಆಗಾಗ್ಗೆ ಸೋಂಕುಗಳು, ಹೆಣ್ಣುಮಕ್ಕಳ ಸಾಮಾಜಿಕ ಮತ್ತು ಪೌಷ್ಟಿಕಾಂಶದ ಸ್ಥಿತಿಯಲ್ಲಿ ಅಸಮಾನತೆ ಮತ್ತು ಶಿಶು ಮತ್ತು ಚಿಕ್ಕ ಮಕ್ಕಳ ಕಾರ್ಯಸಾಧ್ಯವಾದ ಆಹಾರ ಮಾರ್ಗದರ್ಶಿ ಸೂತ್ರಗಳ ಕೊರತೆ.
ನಿಮಗಿದು ತಿಳಿದಿರಲಿ - ಶಿಶುವಿನ ಮೊದಲ 1000 ದಿನಗಳು, ಅಂದರೆ, ಗರ್ಭಾಶಯದಲ್ಲಿ ಇದ್ದಾಗಿನ 270 ದಿನಗಳು ಮತ್ತು ಜನನದ ನಂತರದ 2 ವರ್ಷಗಳು ಮಗುವಿನ ಪೌಷ್ಟಿಕತೆಯ ನಿರ್ಣಾಯಕ ಹಂತ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಮಿದುಳಿನ ಗರಿಷ್ಠ ಬೆಳವಣಿಗೆ ಉಂಟಾಗುತ್ತದೆ ಎಂದು ನಂಬಲಾಗಿದೆ ಮತ್ತು ಈ ನಿರ್ಣಾಯಕ ಅವಧಿಯಲ್ಲಿ ಅಪೌಷ್ಟಿಕತೆ ಉಂಟಾದರೆ ಬೆಳವಣಿಗೆ ಕುಂಠಿತವಾಗತ್ತದೆ.
ಜನನದ 5 ನಿಮಿಷದ ಒಳಗೆ ಮಗುವನ್ನು ತಾಯಿಯ ಚರ್ಮದ ಸ್ಪರ್ಶದಲ್ಲಿ ತರುವದು ಸ್ತನಪಾನವನ್ನು ಪ್ರೋತ್ಸಾಹಿಸುವ ಒಂದು ವಿಧಾನವಾಗಿದೆ. ಇದರಿಂದ ಮಗು ತನ್ನ ತಾಯಿಯ ಎದೆಯನ್ನು ತಲುಪಲು ಸಹಾಯವಾಗುತ್ತದೆ. ತಾಯಿ ಮತ್ತು ಮಗುವಿನ ಈ ಮೊದಲ ಚರ್ಮದ ಸ್ಪರ್ಶದ ಸಂಪರ್ಕ ಮೊದಲ ಸ್ತನಪಾನ ಪೂರ್ಣ ಆಗುವವರೆಗೂ ಇರಬೇಕು.
ಇನ್ನೊಂದು ವಿಧಾನ 'ಕಾಂಗರೂ ಆರೈಕೆ' ಯಲ್ಲಿ ತಾಯಿ ಮಗುವಿನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು, ಮಗುವನ್ನು ಸ್ಪರ್ಶಿಸುವುದು, ಮತ್ತು ಸ್ತನಪಾನ ಮಾಡುವಾಗ ಮುದ್ದು ಮಾಡುವದರಿಂದ ತನ್ನ ಮತ್ತು ಮಗುವಿನ ನಡುವಿನ ಬಾಂಧವ್ಯ ವೃದ್ಧಿಯಾಗುತ್ತದೆ.
ಕೊಲೊಸ್ಟ್ಟ್ರಮ್ - ಮಗುವಿನ ಜನನದ ನಂತರದ ಮೊದಲ ಹಾಲನ್ನು ಮಗುವಿಗೆ ಕುಡಿಸದೆ ನಿರ್ಲಕ್ಷಿಸಬಾರದು, ಏಕೆಂದರೆ, ಈ ಹಾಲಿನಲ್ಲಿ ರಕ್ಷಣಾತ್ಮಕ ಇಮ್ಯುನೊಗ್ಲೋಬ್ಯುಲಿನ್ಗಳು ಮತ್ತು ಕೋಶಗಳ ಸಾಂದ್ರತೆ ಹೆಚ್ಚಿರುತ್ತದೆ. ಶಿಶುವನ್ನು 24 ಗಂಟೆಗಳವರೆಗೆ 8-10 ಬಾರಿ ತಾಯಿಯ ಎದೆಯಲ್ಲಿ ಹಾಲು ತುಂಬುವವರೆಗೂ (Lactation) (1-2 ವಾರ) ಹಾಲುಣಿಸಬೇಕು. ಇದು ಮಗುವಿನಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ, ಮಲ ವಿಸರ್ಜನೆ ಮತ್ತು ತೂಕ ಹೆಚ್ಚಾಗುವ ಸಂಕೇತಗಳನ್ನೊಳಗೊಂಡಿದೆ. ತಾಯಂದಿರು ಸಾಧಾರಣವಾಗಿ ಮಗುವಿನ ಮಲ ವಿಸರ್ಜನೆಯ ಪುನರಾವರ್ತನೆಯ ಸಮಯದ ಬಗ್ಗೆ ಚಿಂತಿಸುತ್ತಾರೆ. ಆದರೆ, ತಾಯಿಗೆ ಮಗು ಸ್ತನಪಾನ ಮಾಡಿದ ಪ್ರತಿ ಸಮಯದ ನಂತರ ಮಲ ವಿಸರ್ಜನೆ ಮಾಡುವುದು ಸಾಮಾನ್ಯವೆಂದು ತಿಳಿಯುವುದು ಅವಶ್ಯವಾಗಿದೆ. ಇದು ಸಾಮಾನ್ಯ ಮತ್ತು ಅತಿಸಾರದ ಸಂಕೇತವಲ್ಲ. ತಾಯಿಗೆ ಮಗುವನ್ನು ಪದೇ ಪದೇ ಹಾಲೂಣಿಸಲು ಪ್ರೋತ್ಸಾಹಿಸುವುದು ತುಂಬಾ ಒಳ್ಳೆಯದು. ನಿದ್ರಿಸುತ್ತಿರುವ ಮಗುವನ್ನು ಅದರ ಮೇಲಿನ ಹೊದಿಕೆ ತೆಗೆಯುವದರ ಮೂಲಕ ಅಥವಾ ಉಟ್ಟ ಬಟ್ಟೆಯನ್ನು ಬದಲಿಸುವ ಮೂಲಕ ಅಥವಾ ತೇವವಾದ ಬಟ್ಟೆಯನ್ನು ಬದಲಿಸುವ ಮೂಲಕ ಸಲೀಸಾಗಿ ಎಚ್ಚರಿಸಬಹುದಾಗಿದೆ.
ಮಗುವಿಗೆ ಸಮರ್ಪಕ ಎದೆ ಹಾಲು ಸಿಗುತ್ತಿದೆ ಎಂದು ಪ್ರಾಯೋಗಿಕ ನಿಯತಾಂಕಗಳಿಂದ ಪರಿಶೀಲಿಸುವುದು ಮತ್ತು ಡಿಜಿಟಲ್ ತೂಕದ ಯಂತ್ರದಲ್ಲಿ ಮಗುವಿನ ತೂಕವನ್ನು 1, 4, 7, 14 ಮತ್ತು 28ನೇ ದಿನದಂದು ಅಳೆಯುವುದು ಈ ನಿರ್ಣಾಯಕ ಅವಧಿಯಲ್ಲಿ ಬಹಳ ಮುಖ್ಯವಾಗಿದೆ. ಮಗುವಿನ ತೂಕವು 10 ರಿಂದ 12% ನಷ್ಟು ಜನನದ ತೂಕಕ್ಕಿಂತ ಕಡಿಮೆ ಆದರೆ, ತೂಕ ಇಳಿಕೆಗೆ ಸೂಕ್ತ ಕಾರಣಗಳನ್ನು ಡಾಕ್ಟರ್ ಪರಿಶೀಲಿಸಬೇಕಾಗುತ್ತದೆ.
ತಾಯಂದಿರು ಸ್ತನಪಾನದ ವಿವಿಧ ಅಂಶಗಳನ್ನು ತಿಳಿದಿಕೊಳ್ಳುವುದು ತುಂಬಾ ಮುಖ್ಯವಾಗಿದೆ - ಹಾಲುಣಿಸುವಾಗ ಮಗುವನ್ನು ಸರಿಯಾಗಿ ಎತ್ತಿಕೊಳ್ಳುವ ವಿಧಾನ ಮತ್ತು ಸ್ತನಗಳಲ್ಲಿ ಊತ, ಮೊಲೆತೊಟ್ಟಿನ ಮೇಲೆ ಬಿರುಕುಗಳು ಮತ್ತು ಎದೆ ಹಾಲು ಬರುವದರಲ್ಲಿ ತಡದಂತಹ ಸಮಸ್ಯೆಗಳಿಗೆ ಚಿಕೆತ್ಸೆ ಪಡೆಯುವುದು.
ಮಗುವಿಗೆ ವಿಶೇಷವಾದ ಸ್ತನಪಾನವು (ಶಿಶುವಿಗೆ ಮೊದಲ 6 ತಿಂಗಳಲ್ಲಿ ವೈದ್ಯರ ಸಲಹೆಯ ಹೊರತು ಎದೆ ಹಾಲು ಹೊರೆತುಪಡಿಸಿ ಯಾವುದೇ ಅನ್ಯ ಆಹಾರ ಅಥವಾ ದ್ರವಗಳನ್ನು ಸೇವಿಸಲು ನೀಡಬಾರದು) ಜನನದ ದಿನದಿಂದ 6ನೇ ತಿಂಗಳ ಕೊನೆವರೆಗೂ (180 ದಿನಗಳು) ನೀಡತಕ್ಕದ್ದು. ಆರು ತಿಂಗಳುಗಳ ನಂತರ, ಪೂರಕ ಆಹಾರದ ಪರಿಚಯದೊಂದಿಗೆ, ತಾಯಿಯ ಮತ್ತು ಮಗುವಿನ ಆಯ್ಕೆಗೆ ಅನುಗುಣವಾಗಿ ಕನಿಷ್ಟ 2 ವರ್ಷಗಳು ಮತ್ತು ಅದಕ್ಕಿಂತಲೂ ಹೆಚ್ಚಾಗಿ ಹಾಲುಣಿಸುವಿಕೆಯನ್ನು ಮುಂದುವರೆಸಬೇಕು. ಎರಡನೆಯ ವರ್ಷದಲ್ಲಿ, ಸ್ತನಪಾನದ ಆವರ್ತನವು ರಾತ್ರಿ ಸೇರಿದಂತೆ 24 ಗಂಟೆಗಳಲ್ಲಿ 4-6 ಬಾರಿ ಇರಬೇಕು. ನೀವು ಕೆಲಸಕ್ಕೆ ಹೋಗುವವರಾಗಿದ್ದರೆ 'Express Milk' ವಿಧಾನದಿಂದ ನಿಮ್ಮ ಸ್ತನವನ್ನು ಲಯಬದ್ಧವಾಗಿ ನಿಮ್ಮ ಕೈಯಿಂದ ಸಂಕುಚಿತಗೊಳಿಸುತ್ತ ಎದೆ ಹಾಲನ್ನು ಹೊರ ತರುತ್ತಾ ಅದನ್ನು ನೀವು ಶುದ್ಧ ಧಾರಕದಲ್ಲಿ ಸಂಗ್ರಹಿಸಬಹುದು.
ತಾಯಿ ಅಸ್ವಸ್ಥವಾಗಿದ್ದರು ಕೂಡ ಮಗುವಿಗೆ ಹಾಲುಣಿಸಬಹುದಾಗಿದೆ ಆದರೆ ಹಾಲುಣಿಸುವ ಮುಂಚೆ ವೈದ್ಯರ ಸಲಹೆ ಪಡೆಯುವುದು ಅತಿ ಮುಖ್ಯವಾಗಿದೆ.